Sunday 11 March 2012

ಒಂದು ಕವುದಿ ಕಾವ್ಯ....

ಇದೆಕೋ ಎನ್ನಲು ಖಂಡವೂ ಇಲ್ಲ, ಬಿಸುಪು ತುಂಬಿದ ಮಾಂಸವೂ ಇಲ್ಲ
ಮೂರಿಂಚಿನ ಸೂಜಿ.. ಪೋಣಿಸಿದ ಮಾರುದ್ದ ನೈಲಾನು ದಾರ
ನಡೆಯುತ್ತವೆ ಸೀಳಿದ ಕಾಲುಗಳು ಬೆರಳುಗುರುಗಳೊಟ್ಟಿಗೆ ಮಾತನಾಡುತ್ತ..
ಹವಾಯಿ ಚಪ್ಪಲಿಗೂ ಕವುದಿಯವಳ ಕಪ್ಪುಕಾಲಿಗೂ ಜನ್ಮಾಂತರದ ಶತ್ರುತ್ವ.

ಕರೆದವರ ಮನೆ ಜಗುಲಿಯೊಳಗೆ ಚೀಲ ಬಿಚ್ಚಿ ಹರವುತ್ತದೆ ಜೀವ,,
ಪುಡಿಬಟ್ಟೆಗಳು, ಹೊಗೆಸೊಪ್ಪಿನ ತುಂಡು, ಸುಣ್ಣದ ಡಬ್ಬಿ.
ಗುಂಡುಜಗತ್ತೇ ಮಲಗಿದೆ ಕವುದಿಯವಳ ಚೀಲದೊಳಗೆ ಸೊಟ್ಟಪಟ್ಟಗೆ
ಬದುಕ ಕಟ್ಟಬಹುದೇ ಹೀಗೆ.. ಕವುದಿಯವಳ ಗೋಣಿಚೀಲದೊಳಗೆ?

ಚೂರುಡೊಂಕು ಸೂಜಿಯೊಳಗೆ ನೈಲಾನು ನೂಲು ನುಗ್ಗಿಸುತ್ತಾಳೆ..
ಮೀನು ಮೊಟ್ಟೆಯಿಟ್ಟಂತೆ.. ಮಿಡತೆ ಠಂಗನೆಗರಿದಂತೆ ಸುನೀತವಾಗಿ..
ಇಲ್ಲಿ ತೂರಿದ ಸೂಜಿ ಮೋಡವೊಂದನ್ನು ಮುಟ್ಟಿ ಮತ್ತೆ ವಾಪಸ್ಸು,
ಈ ಬಾರಿ ಬೆಚ್ಚಿಬಿದ್ದದ್ದು ನೆಲಕ್ಕೆ ಮೆತ್ತಿಕೊಂಡ ಪಾರ್ಥೇನಿಯಂ ಗಿಡ..

ಕವುದಿಯವಳ ಮೌನದೊಳಗೆ ಕೈಕಾಲಿಲ್ಲದ ಕತೆಗಳು ಮಿಸುಕಾಡುತ್ತವೆ..
ಹೊಲೆವ ಕೌದಿಯ ಗ್ಯಾನದಲ್ಲಿ ಇಂದೂ ಅವಳಿಲ್ಲ.. ಸೂಜಿ ಮತ್ತು ನೂಲು ಮಾತ್ರ,
ಎದೆಯೆತ್ತರದ ಮಗನನ್ನು ತಿರುವಿ ಮಲಗಿಸಿದ ಎಂಡೋ ಸಲ್ಫಾನಿನ ಧೂಳು
ಇವಳ ಮಸ್ತಿಷ್ಕದೊಳಗೆ ದುರಂತಕತೆಗಳ ಮೊಟ್ಟೆಯಿಡುತ್ತಿದೆ.

ಹೊಲೆದ ಕವುದಿಗೆ ಕೊಟ್ಟಷ್ಟೇ ಕಾಸು.. ಚೌಕಾಶಿಗೂ ತಾವಿಲ್ಲ.
ಊರ ದೇಹಗಳು ಬೆಚ್ಚಗಿವೆ ಇವಳ ಕವುದಿ ಹೊದ್ದು..
ತಲೆಮೇಲೆ ಹತ್ತಿಕುಳಿತ ಸರಂಜಾಮುಗಳ ಮೂಟೆಯೊಳಗೆ
ಬದುಕೇ ಸಾವಿನೊಟ್ಟಿಗೆ ಚೌಕಾಶಿಗೆಳಸಿದ್ದು.. ನೈಲಾನುದಾರಕ್ಕೆ ಮಾತ್ರ ಗೊತ್ತು

ಯಾರೋ ಬೆಳೆದ ತೆನೆಗೆ ಯಾರದ್ದೋ ಔಷಧ ಸಿಂಪಡಿಸಿದರೆ..
ಇವಳ ಮಗನ ಕೈಕಾಲೇಕೆ ತಿರುಚಿಕೊಂಡವೋ..
ಚಟ್ಟದ ಮೇಲೆ ಮಲಗಿದ್ದ ನ್ಯಾಯದೇವತೆಯ ಬಾಯನ್ನು ಹೊಲೆಯಲಾಗಿದೆ,
ಹೊಲಿಗೆ ಬಿಚ್ಚುವ ಬಗೆಯ ಬಲ್ಲವಳು ತನ್ನ ಪಾಡಿಗೆ ಕವುದಿ ಹೊಲೆಯುತ್ತಾಳೆ.

- ಟಿ.ಕೆ. ದಯಾನಂದ


No comments:

Post a Comment