Monday 12 March 2012

ತುಫಾಕಿ ಕೊಳವೆಯೊಳಗೆ ಮೀನು..

ನೆನಪಿನ ಪಾತಾಳಗರಡಿಯ ಕೊಕ್ಕೆಗೆ ಸಿಕ್ಕಿದೆ ಸತ್ತ ನಕ್ಷತ್ರ
ಹಿಂದೊಮ್ಮೆ ನಗ್ನ ಮೆರವಣಿಗೆಯೊಳಗೆ ನಡೆದೂ ನಡೆದೂ,
ಐದೂ ತಲೆಗಳ ಚೂಪು ಈಗ ಮೊಂಡು ಮೊಂಡು..
ಜೀವನಕ್ಷತ್ರದ ಚೆಲುವು ಬಿನ್ನಾಣಗಳ ಮೇಲೆ ಬರೆದವರು
ಸತ್ತ ನಕ್ಷತ್ರದ ಎದೆಮೇಲೆ ಆಗಷ್ಟೇ ಮಸೆದ ಚೂರಿಯಿಡುತ್ತಾರೆ,

ಅತ್ತ ಬೆವರು ನುಂಗಿದ ಭೂಮಿ, ತೆನೆ ಉಗುಳಲಿಲ್ಲವಾಗಿ..
ಒಂದುಕಾಲದ ಅಂದಗತ್ತಿಯರು ನೆಲದ ಹೊಕ್ಕಳು ಮುಟ್ಟುತ್ತ,
ಚಿಗುರು ದೇವತೆಯರಿಗೂ ಮೊಳಕೆ ದೇವರುಗಳ ಕರೆದು,
ಮೋಡ ದೇವಳಗಳತ್ತ ಮಂಡಿಯೂರಿ ಪ್ರಾರ್ಥಿಸುತ್ತಾರೆ ..
ಕವುಚಿಬಿದ್ದ ಬದುಕು ನೆಲಕ್ಕಪ್ಪಳಿಸಿದ ಸದ್ದು ಅವರಿಗೆ ಕೇಳುತ್ತಿಲ್ಲ.

ಅಗ್ಗಿಷ್ಟಿಕೆಯ ಹಳದಿಬೆಳಕಿನಲ್ಲಿ ತಂಪು,ಬೆಚ್ಚಗಿನ ಅನುಭೂತಿಗಳು,
ಕೈ ಕೈ ಹಿಡಿದು ನರ್ತಿಸುತ್ತಿವೆ.. ಸುಡಬೇಕಿದ್ದ ಬೆಂಕಿಯೇ ಗೈರು,
ಇರಾದೆಗಳ ತುಫಾಕಿ ಕೊಳವೆಯೊಳಗೆ ನೀರು ತುಂಬಿ ಮೀನಿಟ್ಟೆ..
ಭಯದಿಂದ ಒಳಹೋದ ಮೀನುಗಳು ಇನ್ನೂ ಹಿಂತಿರುಗಿಲ್ಲ..
ತುಫಾಕಿಯ ಗಂಧಕ ಖಾಲಿಯಾಗಿರಲಿ, ಚಿಮ್ಮದಿರಲಿ ಗುಂಡು.

ಡಾಂಬರು ರಸ್ತೆಯೊಂದರ ಮೇಲೆ ಬಿಮ್ಮನಸಿಯೊಬ್ಬಳು
ಬಸುರ ಯಾತನೆಯ ಉದ್ದಕ್ಕೆ ಹಾಸಿಕೊಂಡು ಕುಳಿತಿದ್ದಾಳೆ.
ಗರ್ಭಕಟ್ಟಿದ ಅವಳ ಹೂವಿನ ಕಾಡೊಳಗೆ ಜೀವವಿಲ್ಲದ ಕೂಸು
ತಲೆಗೆದರಿಕೊಂಡು ತೇಲುತ್ತಿದೆ.. ಗಾಯಗೊಂಡ ಮೌನ,
ಅವಳು ಕಟ್ಟಿದ ಸುಣ್ಣದಗೂಡಿನ ಇಟ್ಟಿಗೆಗಳಿಗೆ ಬಣ್ಣವೇ ಇರಲಿಲ್ಲ..

ಮೃದ್ವಂಗಿಯೊಂದು ಚಲಿಸುತ್ತಿದೆ.. ಪಾದವೂರಿದ ಕಡೆ ಪ್ರಪಾತ
ಹನಿದ ಪುಡಿಮಳೆಗೆ ಪ್ರಪಾತದೊಳಗೂ ಕೆರೆಯರಳಿ..
ಜೀವನಕ್ಷತ್ರಗಳು ಮಿಸುಕಾಡುತ್ತವೆ, ಅಂದಗತ್ತಿಯರ ವದನವೂ ಅರಳಿ,
ತುಫಾಕಿಯೊಳಗೆ ನುಗ್ಗಿದ ಮೀನುಗಳೂ ಹೊರಬಂದು..
ರಸ್ತೆ ಪಕ್ಕದ ಬಿಮ್ಮನಸಿಗೆ ನಡುರೋಡಲ್ಲೇ ಸತ್ತಕೂಸು ಹುಟ್ಟಿದೆ.

-ಟಿ.ಕೆ. ದಯಾನಂದ

No comments:

Post a Comment