Monday 16 April 2012

ಭೀಮಾ ವಿಲಾಪಂ..ಅನಗತ್ಯ ಪ್ರಲಾಪಂ


ಭೀಮಾತೀರದಲ್ಲಿ ಚಿತ್ರದಲ್ಲಿ ವಿಜಯ್
ಪ್ರಸಕ್ತ ದಿನಗಳಲ್ಲಿ ನಮ್ಮ ಟಿವಿ ಚಾನೆಲ್ ಗಳಿಗೆ ಬರ ಬಿದ್ದು ಒದ್ದಾಡುತ್ತಿರುವ ಉತ್ತರ ಕರ್ನಾಟಕದ ಮಂದಿಯ ದುಮ್ಮಾನಗಳಿಗಿಂತ ಹೆಚ್ಚಿನ ಆದ್ಯತೆಯ ವಿಷಯವಾಗಿ ಮತ್ತು ಕಾಲಮಿತಿಯಿಲ್ಲದೆ ಲಂಬಿಸಿಕೊಂಡು ಹೋಗುವ ನೇರಪ್ರಸಾರದ ಕಾರ್ಯಕ್ರಮಗಳಿಗೆ ಆಹಾರವಾಗಿರುವ ಈ ಚಿತ್ರವನ್ನೊಮ್ಮೆ ನೋಡಬೇಕಲ್ಲ ಎಂದು ಇವಾಗ ತಾನೇ ಭೀಮಾತೀರದಲ್ಲಿ ನೋಡಿಬಂದೆ. ನೋಡಿದ ಮೇಲೆ ಒಂದಷ್ಟು ವಿಷಯಗಳನ್ನು ಇಲ್ಲಿ ಹಂಚಿಕೊಳ್ಳಲೇಬೇಕೆನ್ನಿಸಿದೆ.

ಬಿಜಾಪುರ ಗುಲ್ಬರ್ಗದ ಗಡಿಭಾಗಗಳಲ್ಲಿನ ದೇವಣಗಾಂವ, ಇಂಡಿ ಮತ್ತು ಸೊನ್ನ ಎಂಬ ಗ್ರಾಮಗಳಲ್ಲಿ ದಶಕಗಳ ಹಿಂದೆ ನಡೆದುಹೋದ ಹತ್ಯಾಕಾಂಡ ಪ್ರತೀಕಾರಗಾಥೆಗಳ ಕುರಿತು ಸೌಜನ್ಯಾಪೇಕ್ಷಿಗಳು ಕಥನಗಳನ್ನೂ ಬರೆದರು, ವಿನೈಲ್ ಫ್ಲೆಕ್ಸುಗಳ ಮೂಲಕ ಜಾಹಿರಾತು ಕೊಟ್ಟು ದುಂಡಗೂ ಆದರು. ಶೋಷಣೆಗೋ ಮತ್ತೊಂದಕ್ಕೋ ಈಡಾಗಿ ಕೊಚ್ಚುವ ಕೊಲ್ಲುವ ದಾರಿ ಹಿಡಿದ ಆ ಗ್ರಾಮಗಳ ಹುಂಬ ದಲಿತ ಯುವಕರು ಮತ್ತು ಅವರನ್ನು ಬಳಸಿಕೊಂಡ ಅದೃಶ್ಯ ಬಳಕೆದಾರರು ಇವತ್ತು ರಕ್ತಸಿಕ್ತ ಇತಿಹಾಸವೊಂದರ ಭಾಗವಾಗಿಯಷ್ಟೇ ಉಳಿದಿದೆ. ಧಾರಾವಾಹಿಯಾಗಿ, ಪುಸ್ತಕರೂಪದಲ್ಲಿ ಹೊರಬಂದ ನಂತರ ಇವತ್ತು ಅದೇ ರಕ್ತಸಿಕ್ತ ಇತಿಹಾಸ "ಭೀಮಾತೀರದಲ್ಲಿ" ಎಂಬ ಚಲನಚಿತ್ರವಾಗಿಯೂ ಮೈದಾಳಿರುವುದು ಮತ್ತದು ಹಕ್ಕುದಾರಿಕೆಗಾಗಿ ಹಾಕ್ಯಾಟಗಳಿಗೆ ಕಾರಣವಾಗಿರುವುದು ಬೇರೆ ಬೇರೆ ಕಾರಣಗಳಿಗಾಗಿ, ಅದು ಎಲ್ಲರಿಗೂ ತಿಳಿದಿರುವ ವಿಷಯ.ಚಿತ್ರದ ಕುರಿತು ಮಾತನಾಡುವುದಾದರೆ "ಭೀಮಾತೀರದಲ್ಲಿ" ಚಿತ್ರ ಪತ್ರಿಕಾ ವಿಮರ್ಶೆಗಳ ಶಹಬ್ಬಾಶ್ ಗಿರಿಯ ನಡುವೆಯೂ, ನಿರ್ದೇಶಕ ಆಯ್ದುಕೊಂಡ ವಸ್ತುವಿನ ನಿಭಾವಣೆ ಮತ್ತು ಗುಣಮಟ್ಟದ ಮುನ್ನೆಲೆಯಲ್ಲಿ ಅತ್ಯಂತ ಕಳಪೆ ಚಿತ್ರವಾಗಿಯಷ್ಟೇ ಉಳಿದುಬಿಟ್ಟಿರುವುದು ಚಿತ್ರ ಶುರುವಾದ ಅರ್ಧಗಂಟೆಯೊಳಗೇ ಅರಿವಿಗೆ ಬಂದು ಬಿಡುತ್ತದೆ. ಹಿನ್ನೆಲೆ ಧ್ವನಿಯ ಮೂಲಕ ಚಿತ್ರದ ಅವಶ್ಯವಿವರವನ್ನು ಬಾಯಿಬಿಡುವ ತಂತ್ರಗಾರಿಕೆಯೊಳಗೆ ನಿರೂಪಕ ಹೇಳುವ ಮಾತುಗಳು ಶೋಷಕರು ಮತ್ತು ಶೋಷಿತರು ಇವರಿಬ್ಬರ ನಡುವಿನ ಹೋರಾಟದ ಸುಳಿವನ್ನು ಬಿಟ್ಟುಕೊಟ್ಟು ಕುತೂಹಲ ಮೂಡಿಸುತ್ತವೆ.

ಆದರೆ ಆ ಕಥನ ಕುತೂಹಲವನ್ನು ಕೊನೆಯವರೆಗೆ ದಾಟಿಸಲು ಚಿತ್ರಕಥೆ ಬರೆದವರು ಮತ್ತು ಅದನ್ನು ದೃಶ್ಯರೂಪಕವಾಗಿ ಇಳಿಸುವಲ್ಲಿ ನಿರ್ದೇಶಕರು ಇಬ್ಬರೂ ಅನಾಮತ್ತಾಗಿ ಸೋತಿದ್ದಾರೆ. ಪರಿತ್ಯಕ್ತ ಸಮುದಾಯವೊಂದರ ಸೆಡವು ಮತ್ತು ಶೋಷಕರ ಪ್ರತಿನಿಧಿಗಳ ಪಾತ್ರ ಕಟ್ಟುವಿಕೆಯಲ್ಲಿ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಕಟ್ಟುಪೇಸ್ಟು ಮಾಡುವ ಕುಖ್ಯಾತಿ ಪಡೆದಿರುವ ಓಂ ಪ್ರಕಾಶರಾವ್ ತೇಕು ಹತ್ತಿರುವುದು ಪ್ರತೀ ದೃಶ್ಯಗಳಲ್ಲಿಯೂ ಮುಖಕ್ಕೆ ಹೊಡೆದಂತೆ ಭಾಸವಾಗುತ್ತದೆ. ಗಡಿಭಾಗದ ನಿರ್ಲಕ್ಷಿತರ ಸಮೂಹವೊಂದರಲ್ಲಿಯೇ ತುಳಿತಕ್ಕೊಳಗಾದ ನಾಯಕನಾಗಿ ಚಂದಪ್ಪನನ್ನು ಎತ್ತಿಹಿಡಿಯಲು ಯತ್ನಿಸಿರುವ ರಾಯರ ಎಟುಕುವಿಕೆಗೆ ಆ ಭಾಗದ ಯಾವ ತೀವ್ರತಮ ಸಮಸ್ಯೆಯೂ ನಿಲುಕಿಲ್ಲದಿರುವುದಕ್ಕೆ ಹಲವಾರು ಸಾಕ್ಷಿಗಳು ಚಿತ್ರದ ತುಂಬ ಎಡರುತ್ತವೆ. ಪಾಳೇಗಾರಿಕೆ ಕುರುಹುಗಳು ಇನ್ನೂ ಆಳವಾಗಿ ಬೀಳು ಬಿಟ್ಟಿರುವ ಗಡಿನಾಡ ಕುಗ್ರಾಮವೊಂದರ ಚಂದಪ್ಪನೆಂಬ ಬಾಲಕ ಕಪ್ಪುನಾಯಿ ಸಾಕಿದ "ಧಣಿ ಕೊಟ್ಟ ಹಳಸಿದ ಗಂಜಿಯನ್ನು ಬಿಸಾಡುವ ಮೂಲಕ" ತನ್ನ ಶೋಷಣೆಯ ಪ್ರತಿರೋಧವನ್ನು ದಾಖಲಿಸುತ್ತಾನೆ, ಅಲ್ಲಿಂದ ಹೋಟೆಲು ಸಪ್ಲೈಯರ್ ಆಗುವ ಆ ಹುಡುಗ ಎಲ್ಲ ರೌಡಿಯಿಸಂ ಚಿತ್ರಗಳಂತೆಯೇ ಬಾರ್ ನಲ್ಲೂ ಒಬ್ಬನ ತಲೆ ಒಡೆದು ಅಲ್ಲಿಂದಲೂ ತಪ್ಪಿಸಿಕೊಂಡು ಕುಸ್ತಿ ಪೈಲ್ವಾನ್ ಒಬ್ಬನ ಆಶ್ರಯದಲ್ಲಿ ಬೆಳೆಯುತ್ತಾನೆ.
ಇಲ್ಲಿಯವರೆಗೆ ಚೂರುಪಾರು ಆಸೆ ಹುಟ್ಟಿಸುವ ನಿರ್ದೇಶಕ ನಂತರ ಪುಸುಕ್ಕನೆ ರಾಮ್ ಗೋಪಾಲ್ ವರ್ಮನ "ರಕ್ತಚರಿತ್ರ"ದ ಕಥಾ ಹಂದರದ ಜೇಬಿನೊಳಗೆ ಕೈ ಇಳಿಬಿಡುತ್ತಾರೆ. ಚಂದಪ್ಪನ ಸಾಕುತಂದೆ ಪೈಲ್ವಾನ್ ಊರಿನ ಸಾಹುಕಾರ ದೇಸಾಯಿಯ ವಿರುದ್ಧ ಚುನಾವಣೆಯ ವಿಷಯಕ್ಕೆ ತಿರುಗಿ ಬೀಳುವುದು, ಊರಿನ ಕೆಳಜಾತಿಯವರ ಸಂಘಟನೆಗೆ ಮುಂದಾಗಿ ದೇಸಾಯಿಯ ಅಸಹನೆಗೆ ಪಕ್ಕಾಗಿ ಬಸ್ಸಿನೊಳಗೆ ಕೊಲೆಯಾಗುವುದು ಎಲ್ಲವೂ ರಕ್ತಚರಿತ್ರದ ಪಡಿಯಚ್ಚೇ. ತದನಂತರ ಕಾರಣವೇ ಇಲ್ಲದೇ ಪೈಲ್ವಾನನ ಮಗಳ ಅತ್ಯಾಚಾರವಾಗಿ ಆಕೆ ಕೊಲೆಯಾಗಿ ಆಕೆಯ ಸಾವು ಚಂದಪ್ಪನೊಳಗೆ ಗೊರಕೆ ಹೊಡೆಯುತ್ತಿದ್ದ ವ್ಯಾಘ್ರನನ್ನು ಬಾಲ ಹಿಡಿದು ಜಗ್ಗಿ ಚಂದಪ್ಪ ಸಡನ್ನಾಗಿ ಹೋರಾಟಗಾರನಾಗುತ್ತಾನೆ.ಅಲ್ಲಿಯವರೆಗೆ ದಿವೀನಾಗಿ ಬಿಜಾಪುರದ ಕನ್ನಡ ಮಾತನಾಡುತ್ತಿದ್ದ ಚಂದಪ್ಪ ಕೃತ್ರಿಮವಾಗಿ ಪುಸ್ತಕದ ಮಾತುಗಳನ್ನು ಆಡತೊಡಗುತ್ತಾನೆ. ಸಂಭಾಷಣೆ ಬರೆದಿರುವ ಎಂ.ಎಸ್. ರಮೇಶರ ಪೆನ್ನೊಳಗೆ ಜವಾರಿಕನ್ನಡ ಸರಾಗವಾಗಿ ಇಳಿದಿಲ್ಲ. ಅದಕ್ಕೆ ಅವರು ಆ ಬಾಗದ ಕನ್ನಡಿಗರ ನೆರವನ್ನಾದರೂ ಪಡೆದಿಲ್ಲ ಎಂಬುದಕ್ಕೆ ಚಿತ್ರದಲ್ಲಿ ಬಹಳಷ್ಟು ಪುರಾವೆಗಳಿವೆ. ಚಿತ್ರದ ಬಿಜಾಪುರ ಸೀಮೆಯ ಪಾತ್ರಗಳು ಒಮ್ಮೊಮ್ಮೆ ಕುಂದಾಪುರ ಕಾರವಾರದ ಕನ್ನಡವನ್ನೂ ಮತ್ತೊಮ್ಮೆ ಮಲೆನಾಡು ಸೀಮೆ ಕನ್ನಡವನ್ನೂ ಮಾತುಗಳಲ್ಲಿ ಒಪ್ಪಿಸಿಬಿಡುವ ಅಭಾಸಗಳೂ ಕಣ್ಣಿಗೆ ರಾಚುತ್ತವೆ. ತದನಂತರ ಸಾಕುತಂಗಿಯ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವ ಚಂದಪ್ಪ ಜನನಾಯಕನಾಗಿಯೂ ಮೂಡುವ ಮೂಲಕ ರಾಜಕೀಯದವರಿಗೆ ಓಟು ಗಿಟ್ಟಿಸಿಕೊಡುವ ಮಧ್ಯವರ್ತಿಯಾಗಿಯೂ ಪರಿವರ್ತಿತನಾಗುತ್ತಾನೆ. ಓರ್ವ ರಾಜಕೀಯಾಕಾಂಕ್ಷಿಯನ್ನು ಗೆಲ್ಲಿಸಿಯೂ ಬಿಡುತ್ತಾನೆ. ಆತ ಗೆದ್ದು ಗ್ರಾಮಕ್ಕೆ ಬರಬೇಕಿದ್ದ ಕಾರ್ಖಾನೆ ಮತ್ತು ಸರ್ಕಾರಿ ಆಸ್ಪತ್ರೆಯನ್ನು ಖಾಸಗಿ ಆಸ್ಪತ್ರೆಗಳ ಮತ್ತು ಪಾಳೇಗಾರರ ಲಂಚದಾಸೆಗೆ ತಪ್ಪಿಸುತ್ತಾನೆ. ಇಲ್ಲಿ ಕುಗ್ರಾಮವೊಂದರ ಜನರು ಸರ್ಕಾರಿ ಆಸ್ಪತ್ರೆಯ ಸವಲತ್ತು
ಸಿಕ್ಕಿದರೆ ಖಾಸಗಿ ಆಸ್ಪತ್ರೆಗೆ ಬರುವುದಿಲ್ಲ ಇದನ್ನು ತಪ್ಪಿಸಲು ಖಾಸಗಿ ಆಸ್ಪತ್ರೆಯೊಂದರ ಮಾಲೀಕ ಗೆದ್ದ ರಾಜಕಾರಣಿಗೆ 50 ಲಕ್ಷ ರೂಗಳನ್ನು ಲಂಚವಾಗಿ ಕೊಡುವುದೇ ಹಾಸ್ಯಾಸ್ಪದ. ಕಥಾ ರಚನೆಗಾರನೊಬ್ಬನಿಗೆ ಸಮಕಾಲೀನ ಹಳ್ಳಿಗರ ಬಡತನದ ಸಮಸ್ಯೆಗಳ ಆಳ ಅರಿವು ಇಲ್ಲದಿದ್ದಾಗ ಮಾತ್ರ "ಕುಗ್ರಾಮವೊಂದರಲ್ಲಿ ಗಂಜಿ ಕುಡಿಯುವ ಬಡವರು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಹೋಗುತ್ತಾರೆ" ಎಂಬಂತಹ ನಗೆಪಾಟಲು ಐಡಿಯಾಗಳು ಬರಲು ಸಾಧ್ಯ. ಸರ್ಕಾರಿ ಆಸ್ಪತ್ರೆ ತಪ್ಪಿಸಿದ ರಾಜಕಾರಣಿಯ ವಿರುದ್ಧ ಚಂದಪ್ಪ ತಿರುಗಿ ಬೀಳುತ್ತಾನೆ. ಎರಡು ನಿಮಿಷಕ್ಕೊಮ್ಮೆ ಹೋರಾಟ ಮಾಡುತ್ತೇನೆ ಎನ್ನುತ್ತ ಅದನ್ನು ಚಿತ್ರದ ಕ್ಲೈಮಾಕ್ಸ್ ವರೆಗೆ ಪುನರಿಚ್ಚರಿಸುತ್ತಾನೆ. ಆದರೆ ಚಿತ್ರದಲ್ಲಿನ ಚಂದಪ್ಪ ಏನು ಹೋರಾಟ ಮಾಡುತ್ತಾನೆ, ಯಾತಕ್ಕಾಗಿ ಯಾವ ಘನ ಉದ್ದೇಶಗಳಿಗಾಗಿ ಹೋರಾಟ ಮಾಡುತ್ತಾನೆ, ಯಾರಿಗಾಗಿ ಹೋರಾಟ ಮಾಡುತ್ತಾನೆ ಎಂಬುದು ನಿಗೂಢ ರಹಸ್ಯದಂತೆ ಚಿತ್ರ ಮುಗಿದ ನಂತರವೂ ಬಯಯಲಾಗುವುದೇ ಇಲ್ಲ. ನಡುಮಧ್ಯದಲ್ಲಿ ಬಿಲ್ಡರ್ ಸೇಠುವೊಬ್ಬನನ್ನು ಕುತ್ತಿಗೆಮಟ ಮಣ್ಣಿನಲ್ಲಿ ಹೂತುಹಾಕಿ ರಿವಾಲ್ವರ್ ತೋರಿಸುವ ಚಂದಪ್ಪ ಅವನಿಂದ ಖಾಲಿಪತ್ರವೊಂದಕ್ಕೆ ಸಹಿ ಹಾಕಿಸಿಕೊಂಡು ವಸೂಲಿದಂಧೆಗಿಳಿಯುವುದು ಯಾವ ಬಗೆಯ ಹೋರಾಟ ಎಂಬುದು ಸಂಶೋಧನೆಗೆ ಅರ್ಹವಾದ ವಿಷಯ. ಇದಕ್ಕೆ ಕಥೆ ಬರೆದ ಪ್ರಕಾಂಡ ಪಂಡಿತರೇ ಉತ್ತರಿಸಬೇಕು.
ಜನಹೋರಾಟಗಳ, ಚಳುವಳಿ ಸಿದ್ಧಾಂತಗಳ ಘಮಲಿನ ಪರಿವೆಯಿಲ್ಲದೆ "ರೂಮು ಹಾಕಿಕೊಂಡು" ಕಥೆ ಬರೆಯುವವರಿಗೆ ಜನಹೋರಾಟದ ಕಾವು ಮತ್ತು ಆಂತರ್ಯಗಳ ಅರಿವಾದರೂ ಅಲ್ಪಸ್ವಲ್ಪ ಇದ್ದರೆ ಒಳಿತು. ಚಿತ್ರದ ಸನ್ನಿವೇಶವೊಂದರಲ್ಲಿ ನಾಯಕ ಚಂದಪ್ಪನ ಬಾಯಿಂದ ಗೋಹತ್ಯೆಯ ಬಗ್ಗೆ ಆವೇಶದ ಮಾತುಗಳನ್ನೂ ಆಡಿಸುವ ನಿರ್ದೇಶಕರಿಗೆ ಚಂದಪ್ಪ ಹರಿಜನ ಎಂಬ ವ್ಯಕ್ತಿ ದನವನ್ನು ತಿನ್ನುವ ಈ ನಾಡಿನ ಅಸ್ಪೃಶ್ಯ ಸಮುದಾಯಕ್ಕೆ ಸೇರಿದವನು ಎಂಬ ಮಾಹಿತಿಯೂ ಇದ್ದಂತಿಲ್ಲ. ಜೊತೆಗೆ ಚಂದಪ್ಪನ ತಾಯಿ ಸತ್ತಾಗ ಆಕೆಯ ಚಿತಾಭಸ್ಮವನ್ನು ಚಂದಪ್ಪನ ಕೈಯಿಂದ ಗಂಗಾರ್ಪಣವನ್ನೂ ಮಾಡಿಸುತ್ತಾರೆ,ದಲಿತ ಸಮುದಾಯದ ಪೈಲ್ವಾನ್ ಕೊಲೆಯಾದಾಗ ಆತನ ಮೃತದೇಹಕ್ಕೆ ದಲಿತರ ಶವಸಂಸ್ಕಾರದಲ್ಲಿ ಆಚರಣೆಯಲ್ಲಿರುವ ಹೂಳುವ ಸಂಪ್ರದಾಯಕ್ಕೆ ವಿರುದ್ಧವಾಗಿ "ಅಗ್ನಿಸ್ಪರ್ಶ"ವನ್ನೂ ಮಾಡಿಸುತ್ತಾರೆ. ಬರಹಗಾರರ ಧಾರ್ಮಿಕ ಮನಸ್ಥಿತಿಗಳು ಪಾತ್ರಗಳೊಳಗೆ ಇಂಜೆಕ್ಟ್ ಆಗುವ ಅಪಾಯಕಾರಿ ಮನಸ್ಥಿತಿ ಇಲ್ಲಿ ಢಾಳಾಗಿ ವ್ಯಕ್ತವಾಗುತ್ತದೆ. ಪಾತ್ರಗಳ ಆಯ್ಕೆಯಲ್ಲಿ ಭಯಂಕರವಾಗಿ ಎಡವಿರುವ ನಿರ್ದೇಶಕ ಮತ್ತು ಬರಹಗಾರದ್ವಯರು ಅಲ್ಲಲ್ಲಿ ಹಾದುಹೋಗುವ ಪೋಷಕಪಾತ್ರಗಳಿಗೆ ಸೀರಿಯಲ್ ನಟನಟಿಯರನ್ನು ಎಳೆತಂದು ಅವರಿಗೆ ಊಹಿಸಿಕೊಳ್ಳಲೂ ಸಾಧ್ಯವಿರದ ತುಳಿತಕ್ಕೊಳಗಾದ ದಲಿತಪಾತ್ರಗಳನ್ನು ನೀಡಿ ಅಲ್ಲಲ್ಲಿ ಚಿತ್ರಕ್ಕೆ ಮೆಗಾಸೀರಿಯಲ್ ಸ್ಪರ್ಶವನ್ನೂ ಕೊಟ್ಟಿದ್ದಾರೆ. ಚಂದಪ್ಪನನ್ನು ಹಿಡಿಯಲು ಆಂಧ್ರದಿಂದ ಬರುವ ಪೊಲೀಸ್ ಆಫೀಸರನ ಪಾತ್ರವೊಂದು ದೈವಾಂಶ ಸಂಭೂತ ಸ್ವಾಮಿಗಳೋಪಾದಿಯಲ್ಲಿ ಯಾವ ಕಷ್ಟವನ್ನೂ ಬೀಳದೆ ಚಕಚಕನೆ ಒಂದಷ್ಟು ಸತ್ಯಗಳನ್ನು ಎಳೆದು ಬಿಡಾಡುತ್ತದೆ. ಈ ಸತ್ಯಶೋದನೆಗಳಿಗೆ ಯಾವ ತಾರ್ಕಿಕ ಬೆಂಬಲವೂ ಲಭ್ಯವಿಲ್ಲ. ಮೀಸೆಯಿಲ್ಲದೆ  ಪ್ರತ್ಯಕ್ಷವಾಗುವ ಈ ಪಾತ್ರವು ಧಿಡೀರನೆ ಉದ್ದುದ್ದ ಮೀಸೆಗಳೊಂದಿಗೂ ಒಮ್ಮೊಮ್ಮೆ ತೆಳುಮೀಸೆಯೊಂದಿಗೂ ತೆರೆಗಪ್ಪಳಿಸುತ್ತದೆ.

ಪೋಷಕಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಹಿರಿಯನಟ ಲೋಕನಾಥರು ತಮ್ಮ ನ್ಯಾಯವನ್ನು ಪಾತ್ರದ ಉಡಿಗೆ ಮರ್ಯಾದೆಯಿಂದ ತುಂಬಿದ್ದರೆ ಖಳನಟ ಶರತ್ ಲೋಹಿತಾಶ್ವ ಅವಶ್ಯಕತೆಯೇ ಇಲ್ಲದೇ ತೆಲುಗಿನ ಒಕ್ಕಡು ಚಿತ್ರದ ಪ್ರಕಾಶ್ ರೈ ಥರದಲ್ಲಿ ನಾಯಕಿಗೆ ಐ ಲವ್ಯೂ ಅನ್ನುತ್ತಿರುತ್ತಾರೆ (ಓಂ ಪ್ರಕಾಶಾಯ ನಮಃ), ಸುಚೇಂದ್ರಪ್ರಸಾರದ್ದು ಅಚ್ಚುಕಟ್ಟಾದ ಅಭಿನಯ, ನಾಯಕಿ ಪ್ರಣೀತಾರನ್ನು ಓಂಪ್ರಕಾಶರ ಪ್ರಖ್ಯಾತ ಶೈಲಿಯಲ್ಲಿಯೇ ತೆರೆದೆದೆಯಲ್ಲಿ ಪ್ರವೇಶ ನೀಡಿರುವುದು ನಿರೀಕ್ಷಿತ ಅಪಘಾತವೇ. ಉತ್ತರ ಕರ್ನಾಟಕದ ಜಂಜಡಗಳನ್ನು ಬಿಡಿಸಿಟ್ಟ ಕವಿ ಎಚ್.ಎಸ್. ಶಿವಪ್ರಕಾಶ "ಸಮಗಾರ ಭೀಮವ್ವ"ನಿಗೂ ಈ ಚಿತ್ರದ ನಾಯಕಿ ಮೋಟು ಸ್ಕರ್ಟಿನ, ಸೀಳಿದೆದೆಯ ವಸ್ತ್ರ ತೊಡುವ "ಭೀಮವ್ವ"ನಿಗೂ ಸಾಮ್ಯತೆ ಕಲ್ಪಿಸುವುದು ಎನ್.ಎಸ್. ರಾವ್ ಆಣೆಯಾಗಿಯೂ ಕೂಡದು. ಇಡೀ ಚಿತ್ರದಲ್ಲಿ ಗಮನಸೆಳೆಯುವುದು ಚಂದಪ್ಪನ ತಾಯಿಯ ಪಾತ್ರಧಾರಿ ಉಮಾಶ್ರೀ ಮತ್ತು ಚಂದಪ್ಪನ ತಿರುಚಿದ ಶೈಲಿಯ ನಾಯಕ ಪಾತ್ರದೊಳಗೆ ಸಲೀಸಾಗಿ ಜಾರಿಕೊಂಡಿರುವ ದುನಿಯಾ ವಿಜಯ್ ಮಾತ್ರ. ದುನಿಯಾ ಚಿತ್ರದ ನಂತರ ಮೊಟ್ಟ ಮೊದಲಿಗೆ ನಟಿಸುವ ಮನಸ್ಸು ಮಾಡಿರುವ ವಿಜಯ್ ಈ ಚಿತ್ರದ ಕೆಲವು ದೃಶ್ಯಗಳಲ್ಲಿ ಕಣ್ಣುಗಳಲ್ಲೂ ಮಾತನಾಡುವುದನ್ನು ಕಲಿತುಬಿಟ್ಟಿದ್ದಾರೆ. ಇಡೀ ಚಿತ್ರದಲ್ಲಿ ಹಾಸ್ಯದ ಕೊರತೆಯಿರುವುದನ್ನು ಗಮನಿಸಿರುವ
ಸಂಭಾಷಣೆಗಾರ ಎಂ.ಎಸ್. ರಮೇಶರು ಚಿತ್ರದ ಕೊನೆಯಲ್ಲಿ ತುಂಡುಡುಗೆ ನಾಯಕಿ ಭೀಮವ್ವಳ ಬಾಯಿಂದ ನೆಲ್ಸನ್ ಮಂಡೇಲ, ಎಲ್.ಟಿ.ಟಿ.ಇ ಪ್ರಬಾಕರನ್ ರ ಸಾಧನೆಗಳನ್ನು ಹೇಳಿಸುವ ಮೂಲಕ ಹಾಸ್ಯದ ಕೊರತೆಯನ್ನು ಕಡಿಮೆ ಮಾಡಿದ್ದಾರೆ. ಆಗಷ್ಟೇ ಮಗುವಿಗೆ ಜನ್ಮ ಕೊಟ್ಟ ನಾಯಕಿ ಎದ್ದು ಕುಳಿತು ನಾಯಕನನ್ನು ತಬ್ಬಿಕೊಂಡು ಈ ಮಿನಿಭಾಷಣ ಮಾಡುವುದು ಅರಗಿಸಿಕೊಳ್ಳಲಾಗದ ನಗೆಪಾಟಲಾಗಿ ಕಾಣಿಸುತ್ತದೆ.ನಿರ್ಮಾಪಕ ಅಣಜಿ ನಾಗರಾಜ್, ವಿಜಯ್, ನಿರ್ದೇಶಕ ಓಂಪ್ರಕಾಶ್ ರಾವ್
ರಕ್ತಚರಿತ್ರದ ಗುಂಗಿನಲ್ಲಿ ಅದೇ ಬಗೆಯ ಚಿತ್ರವೊಂದನ್ನು ನಿರ್ದೇಶಿಸುವ ನಿರ್ದೇಶಕ ಓಂಪ್ರಕಾಶರ ಹಪಾಹಪಿಗೆ ಚಂದಪ್ಪ ಹರಿಜನ ಸಿಕ್ಕಿರುವುದು ಕನ್ನಡಚಿತ್ರಪ್ರೇಮಿಗಳ ಪೂರ್ವಜನ್ಮದ ಪಾಪವಿರಬಹುದೇನೋ ಎಂಬಷ್ಟರ ಮಟ್ಟಿಗೆ "ಭೀಮಾ ತೀರದಲ್ಲಿ" ಚಿತ್ರ ನಿರಾಶೆ ಹುಟ್ಟಿಸುತ್ತದೆ. ದುರುಳ ರಾಜಕಾರಣಿಯ ಪಾತ್ರಕ್ಕೆ ಎಣ್ಣೆಮಂತ್ರಿ ರೇಣುಕಾಚಾರ್ಯರನ್ನು ತಂದು ಕೂರಿಸಿರುವ ರಾಯರು ಅವರಿಂದ ನಟನೆ ತೆಗೆಸುವ ಅಸಾಧ್ಯ ದುಸ್ಸಾಹಸಕ್ಕೆ ಕೈ ಹಾಕಿರುವುದು ಸ್ಪಷ್ಟ. ತೆರೆಯ ಮೇಲೆ ಕಾಣಿಸಿಕೊಂಡಕೂಡಲೇ ಆಮಶಂಕೆ ಪೀಡಿತರಂತೆ ವದನಭೂಷಣರಾಗಿ ಸಂಭಾಷಣೆ ಒಪ್ಪಿಸುವ ಅವರ ಪರಿ ಚಿತ್ರದ ಕಾಮೆಡಿ ಟ್ರಾಕ್ ಎಂದು ಕರೆಯಲಡ್ಡಿಯಿಲ್ಲ.

ಇದಿಷ್ಟೂ ಚಿತ್ರದ ಕುರಿತಾಯಿತು, ಇನ್ನು ಈ ಚಿತ್ರ ಮತ್ತು ಚಿತ್ರದ ಕಥಾವಸ್ತುವಿನ ಭೀಮೆಯ ಸುತ್ತಲ ಹಳ್ಳಿಗರ ರಕ್ತಪಾತ ಕಥನಗಳ ಸುತ್ತಲೂ ತಕ್ಕಡಿ ತೂಕದಬಟ್ಟುಗಳನ್ನು ಹಿಡಿದು ವ್ಯಾಪಾರಕ್ಕೆಳಸುತ್ತಿರುವ ಮಂದಿಯ ಮನಸ್ಥಿತಿಗಳನ್ನೂ ಪ್ರಶ್ನಿಸುವುದು ಅನಿವಾರ್ಯವೇ. ಇವತ್ತಿಗೂ ಅಭಿವೃದ್ಧಿಯೆಂಬ ನಾಲ್ಕಕ್ಷರದ ಸೊಲ್ಲು ಎಲ್ಲಿಯೂ ಸೋಕದ ಬರದನಾಡಿನ ಇಂಡಿ, ಅಫಜಲಪೂರ, ಸಿಂಧಗಿ, ಧೂಳಖೇಡ, ಚಡಚಣ, ಉಮರಾಣಿ, ತಾವರಗೇರ, ತಾರಾಪುರ, ಸೊನ್ನ ಮತ್ತು ದೇವಣಘಾಂವ ಗ್ರಾಮಗಳ ದುಸ್ಥಿತಿ, ಅಲ್ಲಿ ಇನ್ನಾದರೂ ಮಡುಗಟ್ಟಿ ಕುಳಿತಿರುವ ಪಾಳೇಗಾರಿಕೆ, ಅದರ ಕಾರಣಕ್ಕೆ ಬಹಿಷ್ಕೃತರಂತೆ ಬದುಕುತ್ತಿರುವ ಇಲ್ಲಿನ ದಲಿತರ ಸಮಕಾಲೀನ ದುಸ್ಥಿತಿಗಳು, ತಾಂಡವಕ್ಕಿಳಿದಿರುವ ಹಸಿವು, ಹೊಂಡದ ನೀರು ಮುಟ್ಟಲೂ ಬಿಡದ ಪಾಳೇಗಾರರ ಕೈಯೊಳಗೆ ಸಿಲುಕಿರುವ ಅಸಹಾಯಕ ಬಡವರ ಬಗ್ಗೆ ಈ ಹಿಂದೆಯೂ ಚರ್ಚೆಯಾಗಿರಲಿಲ್ಲ, ಇವತ್ತಿಗೂ ಚರ್ಚೆಯಾಗುತ್ತಿಲ್ಲ. ಕಡಕೋಳ ಗ್ರಾಮದಲ್ಲಿ ದಲಿತರಿಗೆ ಸಾಮಾಜಿಕ ಬಹಿಷ್ಕಾರ ಹಾಕಿ ಅವರನ್ನು ಊರೊಳಗೆ ಬಿಡದಷ್ಟು ಪೊಗರು ಬೆಳೆಸಿಕೊಂಡಿರುವ ಇಲ್ಲಿನ ಮೇಲ್ವರ್ಗದ ಜನಗಳ ಪೊಗರುಗಳ ಬಗ್ಗೆ ಯಾವ ಪತ್ರಕರ್ತನೂ ಧಾರಾವಾಹಿಯೂ ಮಾಡಲಿಲ್ಲ, ಕಾದಂಬರಿಯನ್ನೂ ಬರೆಯಲಿಲ್ಲ, ಚಿತ್ರರಂಗವೂ ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ವಸ್ತು ವಿಷಯವೊಂದಕ್ಕೆ ಮಾರಾಟವಾಗಬಲ್ಲ ಗುಣವಿದ್ದಾಗ ಮಾತ್ರ ಅದನ್ನು ವ್ಯಾಪಾರಕ್ಕೆಳಸುವ ಮಂದಿಗೆ ಈ ಎಲ್ಲ ಸಮಸ್ಯೆಗಳು ಮತ್ತು ಬರ್ಬರತೆಯ ಅರಿವಿಲ್ಲವೆಂದೇನೂ
ಇಲ್ಲ. ಆದರೆ ವ್ಯಾಪಾರವೇ ಆಗದ ಸರಕಾಗಿರುವ ಹಸಿವಿನತ್ತ ಯಾರ ಕಣ್ಣೂ ಹೊರಳುವುದಿಲ್ಲ.
ಹೀಗಾಗಿ ಸಾಮಾಜಿಕ ಬರ್ಬರತೆಗಳನ್ನು ಪ್ರಧಾನವಾಹಿನಿಗೆ ಮುಟ್ಟಿಸಬೇಕಾದ ಪತ್ರಕರ್ತನೊಬ್ಬ ಅದನ್ನು ದೂರಸರಿಸಿ "ವ್ಯಾಪಾರವಾಗುವ ಗುಣವುಳ್ಳ" ರಕ್ತಸಿಕ್ತ ಕಥನಗಳನ್ನು ಮಾತ್ರ ಬರೆಯುತ್ತಾನೆ. ಅದರ ಆಚೀಚಿನ ವಿವರಗಳ ಮೇಲೆ ಯಾರದ್ದೋ ಮನೆತನಗಳ ಹಗೆತನದ ಗಾಣಕ್ಕೆ ತಲೆಕೊಟ್ಟು ರಕ್ತಪಾತಕಕ್ಕೆ ಇಳಿದ ತಳಸಮುದಾಯದ ಚಂದಪ್ಪ ಹರಿಜನ ಎಂಬುವನೊಬ್ಬ ಅನಾಯಾಸವಾಗಿ ದಲಿತ ಸಮುದಾಯದ ಹೋರಾಟಗಾರನಾಗಿ ತೃಣಮೂಲ ಸಾಮಾಜಿಕತೆಗಳ ಅರಿವಿಲ್ಲದ ನಿರ್ದೇಶಕನೊಬ್ಬನಿಂದ ಚಿತ್ರಿಸಲ್ಪಡುತ್ತಾನೆ. ಹೀಗೆ ತಿರುಚಲ್ಪಟ್ಟ ದಲಿತಯುವಕನೋರ್ವನ "ಪೆನ್" ಕೌಂಟರ್ ಆದ ಹೆಣದ ಮೇಲೆ ಬಿದ್ದು ಚಿಲ್ಲರೆ ಕಾಸು ಆಯ್ದುಕೊಳ್ಳಲು ಪತ್ರಕರ್ತರೂ, ಸಿನಿಮಾಮಂದಿಯೂ ಮುಗಿಬೀಳುತ್ತಾರೆ. ಬರ ಬಂದು ಜನ ತತ್ತರಿಸುತ್ತಿರುವ ಸಮಯದಲ್ಲೇ ರಾಜ್ಯದ ದಿನಪತ್ರಿಕೆಯೊಂದರ ಮುಖದಲ್ಲಿ ಚಂದಪ್ಪ ಹರಿಜನನನ್ನು ಮೊದಲು ಸಂದರ್ಶಿಸಿದ್ದು ಯಾರು ಎಂಬ "ಅಂತರರಾಷ್ಟ್ರೀಯ ಪ್ರಾಮುಖ್ಯತೆಯ" ವಿಷಯವು ಮುಖಪುಟ್ಟದಲ್ಲಿ ಢಾಳಾಗಿ ಪ್ರಕಟಗೊಳ್ಳುತ್ತದೆ. ಈ ಕುರಿತು ಟೀವಿಗಳಲ್ಲಿ ಗಂಟೆಗಟ್ಟಲೆ ಚರ್ಚೆಗಳೂ, ಅವರನ್ನು ಕಂಡರೆ ಇವರಿಗಾಗದ, ಇವರನ್ನು ಕಂಡರೆ ಅವರಿಗಾಗದ ಮಂದಿ ಕೆಮೆರಾ ಮುಂದೆ ಕುಳಿತು ಅವರ ತಲೆ ಮೇಲೆ ಇವರು, ಇವರ ತಲೆ ಮೇಲೆ ಅವರು ಕಣ್ಣಿಗೆ ಕಂಡ ಪಕ್ಷಿಗಳೆಲ್ಲವನ್ನೂ ಕೂರಿಸುತ್ತಾರೆ. ಅನಾಮತ್ತಾಗಿ ನೀಲಿಚಿತ್ರಗಳನ್ನೇ ಪ್ರಸಾರಿಸುತ್ತ ಹೆಣ್ಣುಮಕ್ಕಳ ಖಾಸಗಿತನವನ್ನು ಊರಮುಂದಿನ ಗರುಡಗಂಬಕ್ಕೆ ಕಟ್ಟಿದ್ದ ಜನರು ಹೆಣ್ಣಿನ ಖಾಸಗಿತನದ ಪಾವಿತ್ರತೆಯ ಬಗ್ಗೆ ಮೀಟರುಗಟ್ಟಲೆ ಮಾತನಾಡುತ್ತಿದ್ದಾರೆ. ಮೂರು ಟೀವಿ ಚಾನೆಲ್ಲುಗಳು ಒಂದಕ್ಕೊಂದು ವಿಭಿನ್ನ ದೃಷ್ಟಿಕೋನಗಳ ಚಂದಪ್ಪ ಹರಿಜನನನ್ನು ಸಿನಿಮಾ,ಸಾಹಿತ್ಯ, ಪತ್ರಿಕೋದ್ಯಮದ ಮೂರೂ ಆಯಾಮಗಳಿಂದ ಹೆಟ್ಟಿಕೊಂಡು ಪ್ರಸ್ತುತ ಪಡಿಸುತ್ತಿದ್ದ ಅದೇ ಸಮಯದಲ್ಲಿ ಒಂದು ಪ್ರಶ್ನೆ ಯಾರ ಗಮನಕ್ಕೂ ಬರದೆ ಹೋಗುತ್ತದೆ. ದೇವಣಗಾಂವದ ಸಿದ್ದಪ್ಪ ಬೋರಗಿ ಮತ್ತು ಸೊನ್ನ ಗ್ರಾಮದ ಮಾಣಿಕಪ್ಪ ಮಾಸ್ತರ್ ಕುಟುಂಬಗಳ ಹಗೆತನದ ನಡುವಿನಲ್ಲಿ ಸಿದ್ದಪ್ಪ ಬೋರಗಿಯ ಅನುಯಾಯಿಯಾಗಿ ಎದುರಾಳಿ ಮನೆತನದವರನ್ನು ಕೊಚ್ಚಿ ಕೊಂದು ತಲೆಮರೆಸಿಕೊಂಡು ಕೊನೆಗೆ ಪೊಲೀಸರಿಂದ ಹತ್ಯೆಯಾದ ಚಂದಪ್ಪ ಹರಿಜನನನ್ನು ಹಾಡಿ ಹೊಗಳುವ ಘನಸಾಧನೆಗಳನ್ನು ಆತ ಮಾಡಿದ್ದಾದರೂ ಯಾವಾಗ? ಕರ್ನಾಟಕದ ದಲಿತ ಚರಿತ್ರೆಗಳಲ್ಲಿ ನೆನಪಿಟ್ಟುಕೊಳ್ಳಬಹುದಾದ ಯಾವುದಾದರೂ ಜನಹೋರಾಟಗಳಲ್ಲಿ ಚಂದಪ್ಪ ಭಾಗಿಯಾಗಿದ್ದನೇ?
ಇಷ್ಟಕ್ಕೂ ಈ ಕೊಲೆಪಾತಕ ಮನೆತನಗಳ ವೈಷಮ್ಯ ಕಟ್ಟಿಕೊಂಡು ಯಾರಿಗಾದರೂ ಆಗಬೇಕಿರುವುದಾದರೂ ಏನು? ಚಂದಪ್ಪ ಹರಿಜನನ್ನು ವ್ಯಾಪಾರದ ಸರಕಾಗಿ ಬಳಸಿಕೊಂಡವರು ತಮ್ಮ ಕಪೋಲಕಲ್ಪಿತ ವರದಿಗಳ ಮೂಲಕ ಎರಡೂ ಮನೆತನಗಳ ಹಗೆತನವನ್ನು ಇನ್ನಷ್ಟು ಜಾಸ್ತಿ ಮಾಡಿ, ಅನಾಯಾಸವಾಗಿ ಚಂದಪ್ಪ ಹರಿಜನನ್ನು ಪೆನ್ ಕೌಂಟರ್ ಮೂಲಕ ಹತ್ಯೆ ಮಾಡಿದ್ದು ಈ ರಾಜ್ಯದ ಪತ್ರಿಕಾ ಸಂಪಾದಕರೊಬ್ಬರ ಘನಸಾಧನೆ ಎಂಬುದು ನಿರ್ವಿವಾದ. ದುಡ್ಡು ಮಾಡಿಕೊಂಡಿದ್ದು ಇದೇ ಸಂಪಾದಕ, ಬಡಿದಾಡಿದ್ದು 2 ಮೇಲ್ವರ್ಗದ ಮನೆತನಗಳು ಸತ್ತಿದ್ದು ಒಬ್ಬ ದಲಿತ ಯುವಕ.
ಆತ ಸತ್ತಾದ ಮೇಲೂ ಬಿಡದೆ ಆತನ ಹೆಣದ ಮೇಲೆ ತಕ್ಕಡಿಯಿಟ್ಟುಕೊಂಡು ಪುಸ್ತಕಗಳ ಪುನರ್ ಮುದ್ರಣ ಮತ್ತು ಟಿ.ಆರ್.ಪಿ ಮಾರ್ಕೆಟಿಂಗ್ ತಂತ್ರಗಳ ಮೂಲಕ ಮಾರಾಟ ಮಾಡಿಕೊಂಡು ಚಿಲ್ಲರೆ ಕಾಸು ದುಡಿದುಕೊಳ್ಳುವ ಬದುಕಬೇಕಾದ ಸ್ಥಿತಿಗೆ ಇವತ್ತಿಗೆ ಪತ್ರಿಕೋದ್ಯಮದ ಆಶಯಗಳು ಬಂದು ತಲುಪಿರುವುದು ಇವತ್ತಿನ ದೊಡ್ಡ ದುರಂತ.ಹೀಗಾಗಿ ಭೀಮಾತೀರದಲ್ಲಿ ಚಿತ್ರವಾಗಲೀ, ಚಂದಪ್ಪ ಹರಿಜನನ ಉಮೇದುವಾರಿಕೆಯನ್ನು ಪ್ರಸ್ತುತಪಡಿಸುತ್ತಿರುವವರಾಗಲೀ, ಟೀವಿ ಚಾನೆಲ್ಲುಗಳಾಗಲೀ, ಅದನ್ನು ನೋಡುತ್ತ ಕುಳಿತ ನಮಗಾಗಲೀ ಒಂದು ವಿಷಯ ನೆನಪಿಗೆ ಬರುವುದೇ ಇಲ್ಲ. ಚಂದಪ್ಪ ಹರಿಜನನ ಪತ್ನಿ ಸರೂಬಾಯಿ ಎಂಬಾಕೆಯು ಬದುಕುತ್ತಿರುವ ಗ್ರಾಮವೂ ಇವತ್ತು ಬರಪೀಡಿತ. ನಮ್ಮ ಆದ್ಯತೆಗಳು ಸರೂಬಾಯಿಯ ಗ್ರಾಮದ ದಲಿತರ ಬರ್ಬರ ಬದುಕಾಗಬೇಕೋ ಅಥವ ಎಲೈಟ್ ಕ್ಲಾಸ್ ಮಂದಿಯ ಪಿತೂರಿಗಳಿಗೆ ತಲೆಕೊಟ್ಟು ಕೊಲೆಯಾದ ಚಂದಪ್ಪನ ರಕ್ತಸಿಕ್ತ ಇತಿಹಾಸವಷ್ಟೇ ಮುಖ್ಯವಾಗಬೇಕೋ?

No comments:

Post a Comment